ಚಹಾ -
ತೀಯೇಸೀ (ಟರ್ನ್‍ಸ್ಟ್ರೋಮಿಯೇಸೀ) ಕುಟುಂಬದ ತೀಯ ಸೈನೆನ್ಸಿಸ್ ಅಥವಾ ಕೆಮೆಲಿಯ ಸೈನೆನ್ಸಿಸ್ ಜಾತಿಯ ಉಷ್ಣವಲಯ ನಿವಾಸಿಯಾದ ನಿತ್ಯಹರಿದ್ವರ್ಣದ ಪುಟ್ಟ ಮರ. ಇದರ ಎಳೆಚಿಗುರಿನಿಂದ ತಯಾರಿಸಲಾಗುವ ಪಾನಿಯಕ್ಕೂ ಇದೇ ಹೆಸರಿದೆ. ಈ ಸಸ್ಯದಲ್ಲಿ ಸುಮಾರು 45 ಬಗೆಗಳಿವೆ.

ಚಹಾ ಗಿಡದ ಹುಟ್ಟಿನ ಬಗ್ಗೆ ಅನೇಕ ಕತೆಗಳಿವೆ. ಜಪಾನೀಯರ ದಂತಕಥೆಯೊಂದು ಹೀಗೆ ಹೇಳುತ್ತದೆ. ಬೋಧಿದರಿನ ಎಂಬ ಬೌದ್ಧ ಸನ್ಯಾಸಿಯೊಬ್ಬ ಒಂಬತ್ತು ವರ್ಷಗಳ ಕಾಲ ತಪಸ್ಸಿನಲ್ಲಿದ್ದು, ಆಕಸ್ಮಾತ್ ತಪಸ್ಸಿನ ಮಧ್ಯದಲ್ಲಿ ನಿದ್ದೆ ಹೋದನಂತೆ. ಇದರಿಂದ ಪಶ್ಚಾತ್ತಾಪಗೊಂಡ ಈತ ಕೂಡಲೇ ತನ್ನ ಕಣ್ಣಿನ ರೆಪ್ಪೆಗಳನ್ನು ಕತ್ತರಿಸಿ ನೆಲಕ್ಕೆ ಎಸೆದನಂತೆ. ಈ ರೆಪ್ಪೆಗಳೇ ಚಹಾಗಿಡಗಳಾಗಿ ಬೆಳೆದವಂತೆ.

ಇಂದು ಲಭ್ಯವಿರುವ ಸಾಕ್ಷ್ಯಾಧಾರಗಳ ಪ್ರಕಾರ ಚಹಾಗಿಡದ ತವರು ಚೀನ. ಸುಮಾರು 2000-3000 ವರ್ಷಗಳಿಂದಲೂ ಇದು ಅಲ್ಲಿ ಪಾನೀಯ ಸಸ್ಯವಾಗಿ ಉಪಯೋಗದಲ್ಲಿದೆ. ಅದಕ್ಕೂ ಮುಂಚೆ ಇದನ್ನು ಬಹುಶಃ ಔಷಧಿ ಸಸ್ಯವಾಗಿ ಬಳಸುತ್ತಿದ್ದರೆಂಬ ಅಭಿಪ್ರಾಯವೂ ಉಂಟು. ಬಹು ಹಿಂದೆಯೇ ಇದು ಜಪಾನಿಗೆ ಕಾಲಿಟ್ಟಿತು. ಇನ್ನು ಕೆಲವು ಅಭಿಪ್ರಾಯಗಳ ಪ್ರಕಾರ ಚಹಾಗಿಡ ಭಾರತದ ಅಸ್ಸಾಂ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಪ್ರಥಮವಾಗಿ ಹುಟ್ಟಿಕೊಂಡಿತು. ಅಲ್ಲಿಂದ ಕಾಲಕ್ರಮೇಣ ಪ್ರಪಂಚದ ಉಷ್ಣವಲಯದಲ್ಲಿನ ಇತರ ದೇಶಗಳಿಗೂ ಹರಡಿ ಇಂದು ಚೀನ, ಜಪಾನ್, ಫಾರ್ಮೋಸ, ಜಾವ, ಸುಮಾತ್ರ, ಪೂರ್ವ ಆಫ್ರಿಕ, ಶ್ರೀಲಂಕಾ ಮತ್ತು ಭಾರತಗಳಲ್ಲಿ ಬೇಸಾಯದಲ್ಲಿದೆ. ಇದೊಂದು ಬೆಟ್ಟಸೀಮೆಗಳ ಬೆಳೆ. ಭಾರತದಲ್ಲಿ ಸಮುದ್ರಮಟ್ಟದಿಂದ ಸುಮಾರು 2150 m. ಎತ್ತರದ ಪರ್ವತ ಪ್ರದೇಶಗಳಲ್ಲಿ ಇದರ ಬೇಸಾಯ ಇದೆ. ಬ್ರಹ್ಮಪುತ್ರ ಕಣಿವೆ, ಡಾರ್ಜಿಲಿಂಗ್, ರಾಂಚಿ, ಡೆಹ್ರಾಡೂನ್, ಕಾಂಗ್ರಾ, ತಮಿಳುನಾಡಿನ ನೀಲಗಿರಿ ಬೆಟ್ಟಗಳು, ಅಣ್ಣಾಮಲೈ, ಕೇರಳದ ತಿರುವಾಂಕೂರು ಜಿಲ್ಲೆ, ವೈನಾಡು, ಕರ್ನಾಟಕದ ಕೆಲವು ಭಾಗಗಳು ಚಹಾಗಿಡವನ್ನು ಬೆಳೆಸುವ ಮುಖ್ಯ ಪ್ರದೇಶಗಳು. 

ಸಸ್ಯಶಾಸ್ತ್ರೀಯ ವಿವರಣೆ : ಚಹಾ ಗಿಡ ಸುಮಾರು 15m. ಎತ್ತರಕ್ಕೆ ಬೆಳೆಯುವ ಮರ. ಚಹಾ ತೋಟಗಳಲ್ಲಿ ಸಾಮಾನ್ಯವಾಗಿ ಎಲೆಗಳನ್ನು ಕತ್ತರಿಸಲು ಅನುಕೂಲವಾಗುವಂತೆ ಅಗಾಗ್ಗೆ ಸಮರಿ ಇದು 0.5-1.5m, ಎತ್ತರದ ಪೊದೆಯಂತೆ ಬೆಳೆಸಲಾಗುತ್ತದೆ. ಎಲೆಗಳು ಸರಳ. ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಆಕಾರ ದೀರ್ಘ ವೃತ್ತದಂತೆ; ಅಂಚು ಗರಗಸದಂತಿದೆ. ಎಲೆಯ ಮೇಲ್ಭಾಗ ರೋಮರಹಿತ ಹಾಗೂ ಹೊಳಪುಳ್ಳದ್ದು; ತಳಭಾಗ ಮಾತ್ರ ಬಿಡಿಬಿಡಿಯಾದ ಕೂದಲುಗಳಿಂದ ಕೂಡಿದೆ. ಎಲೆಗಳ ಗಾತ್ರ ವಿವಿಧ ಬಗೆಗಳಲ್ಲಿ ವಿವಿಧ ರೀತಿಯದು. ಉದಾಹರಣೆಗೆ ಕಚಾರ್ ಸ್ಥಳೀಯ ಬಗೆಯ ಎಲೆಗಳ ಉದ್ದ 30-35 ಛಿm ಅಗಲ 15-18 ಛಿm. ನಾನಾ ಬಗೆಯ ಎಲೆಗಳ ಉದ್ದ 15-18 ಛಿm. ಅಗಲ 5-9 ಛಿm.; ಮಣಿಪುರಿ ಹಾಗೂ ಅಸ್ಸಾಮ್ ಬಗೆಯ ಎಲೆಗಳ ಉದ್ದ 15-20 ಛಿm. ಅಗಲ 8-10 ಛಿm. ಚೀನೀ ಬಗೆಯ ಎಲೆಗಳ ಉದ್ದ 5-8 ಛಿm . ಅಗಲ 1 ಛಿm. ಎಲ್ಲ ಬಗೆಯ ಚಹಾ ಎಲೆಗಳೂ ನಿತ್ಯಹಸಿರಾಗಿರುತ್ತವೆ. ಚಹಾಗಿಡದ ಹೂಗಳು ದ್ವಿಲಿಂಗಿಗಳು. ಎಲೆಗಳ ಕಂಕುಳಲ್ಲಿ ಒಂಟೊಂಟಿಯಾಗಿ ಇಲ್ಲವೆ 2-4 ಹೂಗಳ ಗುಂಪುಗಳಲ್ಲಿ ಸಮಾವೇಶಗೊಂಡಿವೆ. ಒಂದೊಂದಲ್ಲೂ 5 ಪುಷ್ಪ ಪತ್ರಗಳು, 5 ದಳಗಳು, ಅಸಂಖ್ಯಾತ ಕೇಸರಗಳು, 3 ಕಾರ್ಪೆಲುಗಳ ಉಚ್ಚ ಸ್ಥಾನದ ಅಂಡಾಶಯ ಇವೆ. ಅಂಡಕೋಶದಲ್ಲಿ 3 ಕೋಣೆಗಳಿವೆ. ಒಂದೊಂದು ಕೋಣೆಯಲ್ಲೂ 4-6 ಅಂಡಕಗಳುಂಟು. ಫಲ ಸಂಪುಟ ಮಾದರಿಯದು. ಇದರ ಗಾತ್ರ 1.5-2 ಛಿm.; ಬಣ್ಣ ಕಂದುಮಿಶ್ರಿತ ಹಸಿರು. ಕಾಯಿಯ ಮೇಲ್ಮೈಯಲ್ಲಿ 3 ಮುಖ್ಯ ಉಬ್ಬುಗಳನ್ನು ಕಾಣಬಹುದು. ಕಾಯ ಒಳಗೆ 3-6 ಬೀಜಗಳಿವೆ.

ವರ್ಗೀಕರಣ ಮತ್ತು ಬಗೆಗಳು : ಚಹಾಗಿಡದ ವಿವಿಧ ಬಗೆಗಳನ್ನು ಚೀನ ಚಹಾ ಮತ್ತು ಅಸ್ಸಾಮ್ ಚಹಾ ಎಂಬ ಎರಡು ಮುಖ್ಯ ಗುಂಪುಗಳಾಗಿ ವಿಂಗಡಿಸಲಾಗಿದೆ. 

ಚೀನ ಚಹಾ ಬಗೆಯ ವೈಜ್ಞಾನಿಕ ಹೆಸರು ಸೈನೆನ್ಸಿಸ್ ಎಂದು. ಇದು ಬಲು ನಿಧಾನವಾಗಿ ಬೆಳೆಯುವಂಥದು. ಗಾತ್ರವೂ ಕುಳ್ಳು. ಎಲೆಗಳು ಸಣ್ಣವು; ಕಿರಿದಾಗಿ ತುಂಬ ದಂತಿತವಾಗಿ ಇವೆ. ಹೂಗಳು ಒಂಟೊಂಟಿಯಾಗಿ ಸ್ಥಿತವಾಗಿವೆ. ಚಳಿಯನ್ನೂ ಕಠಿಣ ಪರಿಸ್ಥಿತಿಗಳನ್ನೂ ಚೆನ್ನಾಗಿ ಎದುರಿಸಬಲ್ಲದು. ಆದರೆ ಇಳುವರಿ ಕಡಿಮೆ.

ಅಸ್ಸಾಮ್ ಚಹಾ ಗುಂಪಿನಲ್ಲಿ ಅಸ್ಸಾಮಿಕ ಮತ್ತು ಮ್ಯಾಕ್ರೊಫಿಲ ಎಂಬ ಎರಡು ಮುಖ್ಯ ಬಗೆಗಳಿವೆ. ಇವುಗಳಲ್ಲಿ ಮೊದಲನೆಯದು ಎತ್ತರವಾಗಿ ಹಾಗೂ ಶೀಘ್ರವಾಗಿ ಬೆಳೆಯುವ ರೀತಿಯದು. ಎಲೆಗಳು ದೊಡ್ಡವು; ಇಳಿಬಿದ್ದಿರುತ್ತವೆ. ಹೂಗಳು 2-4ರ ಗೊಮಚಲಿನಲ್ಲಿ ಸಮಾವೇಶಗೊಂಡಿವೆ. ಇದರಲ್ಲೂ ತಿಳಿ ಹಸಿರು ಬಣ್ಣದ ಎಲೆಗಳುಳ್ಳ ಅಸ್ಸಾಮ್ ತಳಿ ಹಾಗೂ ಕಡು ಹಸಿರು ಬಣ್ಣದ ಎಲೆಗಳುಳ್ಳ ಮಣಿಪುರಿ ತಳಿ ಎಂಬ ಎರಡು ತಳಿಗಳಿವೆ. ಮ್ಯಾಕ್ರೊಫಿಲ ಎಂಬುದು ಜಪಾನಿನಲ್ಲಿ ಬೆಲೆಯುವಂಥದು. ಇದರ ಎಲೆಗಳು ದೊಡ್ಡಗಾತ್ರದವು. ಇದರಿಂದ ತಯಾರಿಸಲಾಗುವ ಕಷಾಯ ಬಲು ಕಹಿಯಾಗಿರುತ್ತದೆ. ಚೀನ ಹಾಗೂ ಅಸ್ಸಾಮ್ ಗುಂಪುಗಳ ಬಗೆಗಳನ್ನು ಅಡ್ಡಹಾಯಿಸಿ ಪಡೆಯಲಾದ ಕೆಲವು ಅಡ್ಡತಳಿಗಳೂ ಇವೆ. ಭಾರತದ ಡಾರ್ಜಿಲಿಂಗ್ ಸುತ್ತಮುತ್ತಣ ಪ್ರದೇಶಗಳಲ್ಲಿ ಇಂಥ ತಳಿಗಳು ಕಾಣದೊರೆಯುತ್ತವೆ.

ತೋಟಗಾರಿಕೆ : ಕಾಫಿ ತೋಟಗಾರಿಕೆಯಂತೆಯೇ ಚಹಾಗಿಡದ ಬೇಸಾಯವೂ ಪ್ರಪಂಚದ ಉಷ್ಣ ಹಾಗೂ ಉಪೋಷ್ಣವಲಯಗಳ ಬೆಟ್ಟಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ. ಸಮಭಾಜಕ ವೃತ್ತದ ಬಳಿಯ ಪ್ರದೇಶಗಳಲ್ಲಿ ಸಮುದ್ರಮಟ್ಟಕ್ಕೆ 1250-2200 ಮಿ. ಎತ್ತರದ ಬೆಟ್ಟಗಳಲ್ಲಿ ಇದನ್ನು ಬೆಳೆಸಲಾಗುತ್ತದೆ. ಇದರ ಬೇಸಾಯಕ್ಕೆ 60-75 ವಾರ್ಷಿಕ ಮಳೆ ಬೀಳುವ ಹಾಗೂ ವರ್ಷದ ಬಹುಕಾಲ ಹೆಚ್ಚು ಆದ್ರ್ರತೆ ಇರುವ ಸ್ಥಳಗಳು ಉತ್ತಮ. ಹವೆ ತಂಪಾಗಿದ್ದಷ್ಟೂ ಒಳ್ಳೆಯದು. ಹೀಗೆ ತಂಪು ಹವೆಯುಳ್ಳ ಪ್ರದೇಶಗಳಲ್ಲಿ (ಉದಾಹರಣೆಗೆ ಈಶಾನ್ಯ ಭಾರತದ ಹಿಮಾಲಯದ ತಪ್ಪಲಿನ ಬೆಟ್ಟಗಳಲ್ಲಿ) ಬೆಳೆದ ಚಹಾದ ಗುಣಮಟ್ಟ ಉತ್ಕøಷ್ಟವಾಗಿರುತ್ತದೆ. ಉಷ್ಣತೆ 55 ಈ. ಗಿಂತ ಕಡಿಮೆಯಾಗಲೀ 85 ಈ. ಗಿಂತ ಹೆಚ್ಚಾಗಲೀ ಇರಬಾರದು. ಚಹಾಗಿಡ ಕಡುಚಳಿಯನ್ನು ತಡೆದುಕೊಳ್ಳಲಾರದು. ಚಹಾ ತೋಟದ ಮಣ್ಣು ಪಾರಗಮ್ಯವಾಗಿಯೂ ಮಳೆಯ ನೀರು ಸುಲಭವಾಗಿ ಹರಿದುಹೋಗುವಂಥದೂ ಆಗಿರಬೇಕು. ಕೆಂಪು ಅಥವಾ ಕಂದು ಗೋಡು ಅಥವಾ ಲ್ಯಾಟರೈಟ್ ಮಣ್ಣು ಉತ್ತಮ ಬಗೆಯದು. ಮಣ್ಣು ಆಮ್ಲೀಯವಾಗಿರಬೇಕಲ್ಲದೆ ಸಾಕಷ್ಟು ಮೊತ್ತದಲ್ಲಿ ಅಲ್ಯೂಮಿನಿಯಮ್ ಧಾತುವನ್ನು ಕೂಡ ಪಡೆದಿರಬೇಕು.

ಚಹಾ ಗಿಡವನ್ನು ಸಾಮಾನ್ಯವಾಗಿ ಬೀಜಗಳಿಂದ ವೃದ್ಧಿಸಲಾಗುತ್ತದೆ. ಬೀಜಗಳನ್ನು ಪಡೆಯಲೆಂದೇ ಇಳುವರಿ ಹಾಗೂ ಗುಣಮಟ್ಟದ ದೃಷ್ಟಿಯಿಂದ ಉತ್ತಮ ಎನಿಸುವ ಕೆಲವು ಗಿಡಗಳನ್ನು ಪ್ರತ್ಯೇಕವಾಗಿ ಎಕರೆಗೆ 70-100 ಗಿಡಗಳ ತೋಟಗಳಲ್ಲಿ ಬೆಳೆಸುವ ಕ್ರಮ ಉಂಟು. ಹೀಗೆ ಬೆಳೆಸಿದ ಗಿಡಗಳಿಗೆ ಒಂದೊಂದಕ್ಕೂ 11/2 ಕೆ.ಜಿ. ಅಮೋನಿಯಮ್ ಸಲ್ಫೇಟ್, 1/2 ಕೆ.ಜಿ. ಸೂಪರ್ ಫಾಸ್ಫೇಟ್ ಮತ್ತು 1/2 ಕೆ.ಜಿ. ಮ್ಯೂರಿಯೇಟ್ ಆಫ್ ಪೊಟ್ಯಾಷ್ ಗೊಬ್ಬರಗಳನ್ನು ಹಾಕಲಾಗುತ್ತದೆ, ಇಂಥ ಪ್ರದೇಶಗಳಲ್ಲಿ ಯಾವ ತೆರನ ಕಳೆಯೂ ಬೆಳೆಯದಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದ ಹಾಕಿದ ಗೊಬ್ಬರದ ಪೌಷ್ಟಿಕಾಂಶಗಳೆಲ್ಲ ಚಹಾಗಿಡಗಳಿಗೆ ಒದಗುವುವಲ್ಲದೆ ಕಾಯಿಗಳು ಬಲಿತು ಬಿರಿದಾಗ ಸಿಡಿಯುವ ಬೀಜಗಳನ್ನು ಸಂಗ್ರಹಿಸುವುದಕ್ಕೂ ಅನುಕೂಲವಾಗುತ್ತದೆ. ಹೀಗೆ ಸಂಗ್ರಹಿಸಿದ ಬೀಜಗಳನ್ನು ಪ್ರತ್ಯೇಕ ನರ್ಸರಿಗಳ ಮರಳು ಭೂಮಿಯಲ್ಲಿ ಮೊಳೆಯಿಸಲಾಗುತ್ತದೆ. ಇವನ್ನು ಬಿಸಿಲು ಹಾಗೂ ಗಾಳಿಗಳಿಂದ ರಕ್ಷಿಸಲು ಇವುಗಳ ಮೇಲೆ ನೀರಿನಲ್ಲಿ ನೆನೆಸಿದ ಗೋಣಿತಾಟನ್ನು ಮುಚ್ಚಲಾಗುತ್ತದೆ. ಮೊಳಕೆಯೊಡೆದು ಹೊರಬರುವ ಎಳೆಯ ಸಸಿಗಳನ್ನು ಬಿದಿರಬುಟ್ಟಿಗಳಿಗೆ ಇಲ್ಲವೆ ಪಾಲಿತೀನ್ ಚೀಲಗಳಿಗೆ ವರ್ಗಾಯಿಸಿ ನೆರಳಿನಲ್ಲಿ ಇಡಲಾಗುತ್ತದೆ. 6-12 ತಿಂಗಳ ಅನಂತರ ಈ ಸಸಿಗಳನ್ನು ಅವುಗಳ ಶಾಶ್ವತ ಸ್ಥಳಗಳಿಗೆ ವರ್ಗಾಯಿಸಬಹುದು. ಹೀಗೆ ಮಾಡುವಾಗ ಗಿಡಗಳನ್ನು ಬುಟ್ಟಿಯಿಂದ ಪೂರ್ಣವಾಗಿ ಹೊರತೆಗೆಯುವುದಿಲ್ಲ. ಈ ರೀತಿ ಮಾಡುವಾಗ ಗಿಡಗಳನ್ನು ಬುಟ್ಟಿಯಿಂದ ಪೂರ್ಣವಾಗಿ ಹೊರತೆಗೆಯುವುದಿಲ್ಲ. ಈ ರೀತಿ ಮಾಡಿದರೆ ಸಸಿ ಸತ್ತುಹೋಗುವ ಸಂಭವ ಉಂಟು. ಕೆಲವು ಸಲ ಸಸಿಗಳನ್ನು 3 ವರ್ಷ ವಯಸ್ಸಾಗುವವರೆಗೂ ನರ್ಸರಿಯಲ್ಲೇ ಬಿಟ್ಟಿದ್ದು ಅನಂತರ ಶಾಶ್ವತ ಸ್ಥಳಗಳಿಗೆ ವರ್ಗಾಯಿಸುವುದುಂಟು. ಸಸಿಗಳನ್ನು ವರ್ಗಾಯಿಸುವ ಮೊದಲು ತೋಟಕ್ಕೆ ಆರಿಸಲಾದ ಭೂಮಿಯನ್ನು ಹದಗೊಳಿಸುವುದು ಅತ್ಯವಶ್ಯ. ಕಾಡು ಕಡಿದು ಹದಗೊಳಿಸಿದ ಸ್ಥಳವೇ ಅತ್ಯುತ್ತಮವಾದರೂ ಹುಲ್ಲುಗಾವಲು ಇಲ್ಲವೆ ಬೇರೆ ಬೆಳೆಯನ್ನು ಕೃಷಿ ಮಾಡಿದ ಸ್ಥಳಗಳೂ ಒಳ್ಳೆಯವೇ. ಹುಲ್ಲನ್ನಾಗಲಿ, ಕಾಡುಗಿಡಗಳನ್ನಾಗಲಿ ಕತ್ತರಿಸಿ ತೆಗೆಯಬೇಕೇ ವಿನಾ ಬೆಂಕಿಯಿಂದ ಸುಟ್ಟು ಅಲ್ಲ. ಏಕೆಂದರೆ ಚಹಾಗಿಡ ಬೂದಿಯಿರುವಂಥ ಸ್ಥಳಗಳಲ್ಲಿ ಚೆನ್ನಾಗಿ ಬೆಳೆಯದು. ನೀರು ಚೆನ್ನಾಗಿ ಹರಿದುಹೋಗುವಂತೆ ಸೂಕ್ತವಾದ ಹರಿಗಾಲುವೆಗಳನ್ನು ನಿರ್ಮಿಸಿ, ಸಣ್ಣ ದಬ್ಬೆಹುಲ್ಲು, ಹೊಂಬಾಳೆಹುಲ್ಲು, ಶುಂಠಿಹುಲ್ಲು ಮುಂತಾದ ಗೆಡ್ಡೆಗಳಿರುವ ಹುಲ್ಲು ಕಳೆಗಳನ್ನು ಕಿತ್ತು ಹಾಕಿ, ಚೆನ್ನಾಗಿ ಉತ್ತು ಹದಗೊಳಿಸಬೇಕು. ಅನಂತರ 1/4ಮಿ. ಸುತ್ತಳತೆಯ ಹಾಗೂ 1/3ಮಿ. ಆಳದ ಗುಂಡಿಗಳನ್ನು ತೋಡಲಾಗುತ್ತದೆ. ಗುಂಡಿಗಳು m. ಅಂತರದ ಸಾಲುಗಳಲ್ಲಿರುತ್ತವೆ. ಒಂದು ಸಾಲಿನಲ್ಲಿ ಒಂದು ಗುಂಡಿಯಿಂದ ಇನ್ನೊಂದಕ್ಕೆ . ಅಂತರವಿರುವುದು ಉತ್ತಮ. ಕಾಫಿ ಗಿಡಗಳಿಗೆ ಬೇಕಾಗುವಷ್ಟು ನೆರಳು ಚಹಾಗಿಡಗಳಿಗೆ ಬೇಕಿಲ್ಲವಾದರೂ ಗಿಡಗಳು ಎಳೆಯವಿರುವಾಗ ಸಾಕಷ್ಟು ನೆರಳು ಅವಶ್ಯಕ. ಸಸಿಗಳು ಚಿಕ್ಕವಿರುವಾಗ ಕೆಲವು ಬಗೆಯ ಜರೀ ಗಿಡಗಳನ್ನು, ಕ್ರೋಟಲೇರಿಯ, ಟೆಪ್ರೋಸಿಯ, ಕಾಡುಜೋಳ ಮುಂತಾದ ಗಿಡಗಳನ್ನು ನೆರಳೀಯುವ ಗಿಡಗಳಾಗಿ ಬೆಳೆಸುವುದುಂಟು. ಗಿಡಗಳು ದೊಡ್ಡವಾದಂತೆ ಬಾಗೆ, ಬಿಲ್ವಾರ, ಹಾಲುವಾನ, ಗ್ಲಿರಿಸಿಡಿಯ, ನಾಟಿ ಓಕ್ ಮರ ಮುಂತಾದವನ್ನು ನೆರಳು ಸಸ್ಯಗಳಾಗಿ ಬೆಳೆಸುತ್ತಾರೆ. ಇವುಗಳಿಂದ ನೆರಳು ಸಿಗುವುದೊಂದೇ ಅಲ್ಲದೆ ಚಹಾಗಿಡ ಬೆಳೆಯುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಇರುವ ಗಾಳಿಯ ರಭಸವನ್ನು ತಡೆಯುವ ಅನುಕೂಲವೂ ಇದೆ. ಚಹಾ ತೋಟದಲ್ಲಿ ನಿಯತ ರೀತಿಯ ಅಗೆಯುವಿಕೆ, ಕಳೆ ಕೀಳುವಿಕೆ ಮುಂತಾದವನ್ನು ನಡೆಸುವುದು ಅತ್ಯವಶ್ಯ. ಆದರೆ ಆಳವಾಗಿ ಅಗೆಯುವುದು ಸಲ್ಲದು. ಹೀಗೆ ಮಾಡಿದರೆ ಭೂಮಿಯ ಮೇಲ್ಭಾಗದಲ್ಲಿ ಹರಡಿರಬಹುದಾದ ಚಹಾಗಿಡದ ಬೇರುಗಳು ಹಾಳಾಗುವ ಸಂಭವವುಂಟು. ಕಳೆಗಳನ್ನು ತೆಗೆಯಲು ಬೇಕಾಗುವಷ್ಟು ಮಾತ್ರ ಮಣ್ಣನ್ನು ಕೆದರುವುದು ಒಳ್ಳೆಯದು. ಇತ್ತೀಚೆಗೆ ಕಳೆನಾಶಕಗಳ ಬಳಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಚಹಾ ತೋಟಕ್ಕೆ ವ್ಯವಸ್ಥಿತ ರೀತಿಯಲ್ಲಿ ಸಾಕಷ್ಟು ಮೊತ್ತದ ಗೊಬ್ಬರ ಹಾಕುವುದೂ ಅಗತ್ಯ. ಚಹಾ ತೋಟದಲ್ಲಿ ನೆರಳುಗಿಡಗಳು ಹೆಚ್ಚಾಗಿರುವುದಿಲ್ಲವಾದ್ದರಿಂದ ಭೂಮಿಯ ಮೇಲೆ ಎಲೆ ಮುಂತಾದವು ಬೀಳುವುದಿಲ್ಲ. ಇದರಿಂದ ಸಾವಯವ (ಆಗ್ರ್ಯಾನಿಕ್) ವಸ್ತುಗಳ ಅಗತ್ಯ ಇಲ್ಲಿ ಹೆಚ್ಚು. ಇವನ್ನು ಕೊಟ್ಟಿಗೆ ಗೊಬ್ಬರ, ಹಸಿರು ಗೊಬ್ಬರ, ಕಾಂಪೋಸ್ಟುಗಳ ರೂಪದಲ್ಲಿ ಒದಗಿಸಬಹುದು. ಇವುಗಳಲ್ಲೆಲ್ಲ ಹಸಿರು ಗೊಬ್ಬರವೇ ಅತ್ಯುತ್ತಮ. ಇದಕ್ಕಾಗಿ ಸಾಮಾನ್ಯವಾಗಿ ಎಲ್ಲ ಚಹಾ ತೋಟಗಳಲ್ಲೂ ಟೆಪ್ರೋಸಿಯ, ಕ್ರೋಟಲೇರಿಯ, ಸೆಸ್ಟೇನಿಯ (ಮುಳ್ಳುಜೀನಂಗಿ) ಮುಂತಾದ ಗಿಡಗಳನ್ನು ಬೆಳೆಸುವ ಕ್ರಮ ಉಂಟು. ಇದಲ್ಲದೆ ಚಹಾಗಿಡಗಳಿಗೆ ಸೇಂಗಾ ಹಿಂಡಿ, ಅಮೋನಿಯಮ್ ಫಾಸ್ಪೇಟ್, ಸೂಪರ್ ಫಾಸ್ಫೇಟ್, ಪೊಟ್ಯಾಸಿಯಮ್ ಸಲ್ಫೇಟ್ ಮುಂತಾದ ರಸಗೊಬ್ಬರಗಳೂ ಅತ್ಯಂತ ಅವಶ್ಯಕ. ಚಹಾಸೊಪ್ಪಿನ ಇಳುವರಿಗೂ ಗಿಡದ ನೈಟ್ರೋಜನ್ ಅವಶ್ಯಕತೆಗೂ ಅತ್ಯಂತ ನಿಕಟ ಸಂಬಂಧವಿರುವುದರಿಂದ ಆದಷ್ಟು ಹೆಚ್ಚು ಮೊತ್ತದಲ್ಲಿ ನೈಟ್ರೋಜನ್ ಒದಗಿಸುವುದು ಅತ್ಯಗತ್ಯ.

ಕುಡಿ ಚಿವುಟುವುದು ಮತ್ತು ಸವರಿಕೆ : ಚಹಾ ಗಿಡವನ್ನು ಅದರ ಎಳೆಚಿಗುರಿಗಾಗಿ ಬೆಳೆಸುವುದರಿಂದ ಆದಷ್ಟು ಹೆಚ್ಚು ಕುಡಿಗಳು ಹೊಮ್ಮುವಂತೆ ಮಾಡಬೇಕು. ಕೈಯಿಂದ ಚಿವುಟಲು ಅನುಕೂಲವಾಗುವಂತೆ ಅದರ ಎತ್ತರ ಕಡಿಮೆ ಇರುವುದೂ ಅವಶ್ಯಕ. ಇವನ್ನು ಸವರಿಕೆಯ ಮುಖಾಂತರ ಸಾಧಿಸಬಹುದು. ಮೊದಲ ಸವರಿಕೆಯನ್ನು ಚಹಾಗಿಡ 2/3-1ಮಿ. ಎತ್ತರ ಬೆಳೆದಾಗ ಮಾಡಲಾಗುತ್ತದೆ. ಎರಡನೆಯ ವರ್ಷ ಮುಖ್ಯ ಕಾಂಡ ಮತ್ತು ಕವಲುಗಳನ್ನು ಸುಮಾರು 1/2 m. ಎತ್ತರಕ್ಕೆ ಸಮವಾಗಿಯೂ ಮೂರನೆಯ ವರ್ಷ ಹಿಂದಿನ ವರ್ಷಕ್ಕಿಂತ 7ಛಿm. ಹೆಚ್ಚು ಬಿಟ್ಟೂ ಸವರಲಾಗುತ್ತದೆ. ಅನಂತರ ಪ್ರತಿವರ್ಷ 3-7 ಛಿm ಬಿಟ್ಟು ಸವರುತ್ತಾರೆ. ಇಳುವರಿ ಕಡಿಮೆಯಾಗಲು ಪ್ರಾರಂಭವಾದಾಗ ನೆಲದಿಂದ 30-45 ಛಿm. ಎತ್ತರದಲ್ಲಿ ತುಂಬು ಸವರಿಕೆ ಮಾಡುವುದು ರೂಢಿಯಲ್ಲಿರುವ ಕ್ರಮ.

ಚಹಾ ತಯಾರಿಕೆಗಾಗಿ ಚಹಾ ಎಲೆ ಬಿಡಿಸುವುದು ಗಿಡಕ್ಕೆ 3 ವರ್ಷ ವಯಸ್ಸಾದ ಬಳಿಕ ಪ್ರಾರಂಭವಾಗುತ್ತದೆ. ಕೆಲವು ಕಡೆ ಇದಕ್ಕೂ ಮೊದಲೇ ಲಘು ಪ್ರಮಾಣದಲ್ಲಿ ಚಿವುಟುವುದುಂಟು. 3 ವರ್ಷಕ್ಕೆ ಗಿಡ 1 m ಎತ್ತರ ಹಾಗೂ 1 m. ಅಗಲ ಇರುತ್ತದೆ. ಬಿಸಿ ಹವೆಯಿದ್ದು ಆಗಾಗ ಮಳೆ ಬೀಳುತ್ತಿದ್ದರೆ ವರ್ಷದ ಎರಡು ಎಲೆಗಳನ್ನು ಚಿವುಟಿ, ಕೆಳಗಿನ ಹಳೆಯ 2-3 ಎಲೆಗಳನ್ನು ಹಾಗೆಯೇ ಬಿಡಬೇಕು. ವರ್ಷಕ್ಕೆ 10 ರಿಂದ 15 ಸಲ ಹೊಸ ಚಿಗುರು ಬರುತ್ತದೆ. ಎಲ್ಲ ಚಿಗುರುಗಳೂ ಒಂದೇ ಸಲಕ್ಕೆ ಬರುವುದಿಲ್ಲವಾದ್ದರಿಂದ ಸಾಮಾನ್ಯವಾಗಿ ವರ್ಷದಲ್ಲಿ 30ಕ್ಕಿಂತಲೂ ಹೆಚ್ಚು ಸಲ ಎಲೆ ಚಿವುಟುವುದುಂಟು.
ಚಹಾ ಇಳುವರಿ : ಚಹಾ ಎಲೆಯನ್ನು ಬಿಡಿಸುವ ಕೆಲಸದ ಪ್ರಾರಂಭ ಗಿಡಗಳನ್ನು ಬೆಳೆಸಿದ ರೀತಿಯನ್ನು ಅವಲಂಬಿಸಿದೆ. ಕಾಂಡತುಂಡುಗಳಿಂದ ಬೆಳೆಸಿದ್ದರೆ ತುಂಡುಗಳನ್ನು ನೆಟ್ಟ 2 ವರ್ಷಗಳ ಅನಂತರವೂ ಬೀಜಗಳ ಮೂಲಕ ವೃದ್ಧಿಸಿದ್ದರೆ ಗಿಡಕ್ಕೆ 4 ವರ್ಷ ವಯಸ್ಸಾದ ಅನಂತರವೂ ಈ ಕಾರ್ಯ ಆರಂಭವಾಗುತ್ತದೆ. ಇದೇ ರೀತಿ ಬೆಟ್ಟಗಳ ಕೆಳಮಟ್ಟದಲ್ಲಿರುವ ತೋಟಗಳಲ್ಲಿ ಗಿಡಗಳು ಚಿಕ್ಕ ವಯಸ್ಸಿನವಾಗಿರುವಾಗಲೂ ಉನ್ನತಮಟ್ಟಗಳಲ್ಲಿನ ತೋಟಗಳಲ್ಲಿ ಗಿಡಗಳು ಕೊಂಚ ದೊಡ್ಡವಾದ ಮೇಲೂ ಈ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಎಲೆ ಚಿವುಟುವ ಕೆಲಸ ಮುಖ್ಯವಾಗಿ ಹೆಂಗಸರದ್ದು. ಇವರು ತಮ್ಮ ಬೆನ್ನಿಗೆ ಬಿದಿರಿನ ದೊಡ್ಡ (ಸುಮಾರು 7-8 ಕೆ.ಜಿ. ಹಸಿ ಎಲೆ ಹಿಡಿಯುವಷ್ಟು ದೊಡ್ಡದಾದ) ಬುಟ್ಟಿಗಳನ್ನು ಕಟ್ಟಿಕೊಂಡು ತಮ್ಮ ಹೆಬ್ಬೆರಳು ಮತ್ತು ತೋರುಬೆರಳುಗಳ ಸಹಾಯದಿಂದ ತುದಿಮೊಗ್ಗುಗಳನ್ನೂ ಅವುಗಳೊಂದಿಗೆ ಇರುವ ಆತ್ಯಂತ ಚಿಕ್ಕ ಎಲೆಗಳನ್ನೂ ಚಿವುಟಿ ತೆಗೆಯುತ್ತ ಬುಟ್ಟಿಗೆ ಹಾಕುತ್ತ ಸಾಗುತ್ತಾರೆ. ಹೀಗೆ ದಿನವೊಂದಕ್ಕೆ ಸುಮಾರು 15-40ಕೆ,ಜಿ, ಹಸಿಎಲೆಯನ್ನು ಇವರು ಬಿಡಿಸುವುದುಂಟು. ಎಲೆ ಬಿಡಿಸುವ ಕಾರ್ಯ ಉಷ್ಣ ಹವೆಯಲ್ಲಿ ಇಲ್ಲವೆ ಕೆಳಮಟ್ಟದ ತೋಟಗಳಲ್ಲಿ 7-10 ದಿವಸಗಳಿಗೊಮ್ಮೆ ಮತ್ತು ಚಳಿ ಹವೆಯಲ್ಲಿ 14 ದಿವಸಗಳಿಗೊಮ್ಮೆ ನಡೆಯುತ್ತದೆ. ಇತ್ತೀಚೆಗೆ ಕೆಲವೆಡೆ ಯಾಂತ್ರಿಕ ಸಾಧನಗಳನ್ನು ಉಪಯೋಗಿಸಿ ಎಲೆ ಚಿವುಟಿ ಪಡೆಯುವ ಕಾರ್ಯವನ್ನು ನಡೆಸಲಾಗುತ್ತಿದೆ. ಬುಟ್ಟಿಗಳಲ್ಲಿ ಸಂಗ್ರಹವಾಗುತ್ತ ಹೋಗುವ ಚಹಾ ಎಲೆಗಳು ಅದುಮದ ಹಾಗೆ ಎಚ್ಚರ ವಹಿಸಲಾಗುತ್ತದೆ. ಹೀಗಾದರೆ ಶಾಖ ಉತ್ಪತ್ತಿಯಾಗುತ್ತದೆ. ಅಲ್ಲದೆ ಎಲೆಗಳ ಮೇಲೆ ಕೊಂಚ ತೇವವಿರುವುದರಿಂದ ಕೆಲವು ಬಗೆಯ ಸೂಕ್ಷ್ಮಾಣುಗಳು ವೃದ್ಧಿಯಾಗಿ ಚಹಾಸೊಪ್ಪಿನ ಆಖೈರು ಗುಣ ಇಳಿಯುವ ಸಂಭವವುಂಟು. ಚಹ ಗಿಡದ ವಯಸ್ಸು, ಬಗೆ ಮುಂತಾದವನ್ನು ಅವಲಂಬಿಸಿ ಇಳುವರಿಯ ಮೊತ್ತ ವ್ಯತ್ಯಾಸವಾಗುತ್ತದೆ. ಗಿಡ ಚಿಕ್ಕ ವಯಸ್ಸಿನದಾಗಿದ್ದಾಗ ಇಳುವರಿ ಕಡಿಮೆ. ಇದು ವರ್ಷಂಪ್ರತಿ ಏರುತ್ತ ಹೋಗಿ ಗಿಡಕ್ಕೆ 6-7 ವರ್ಷ ವಯಸ್ಸಾದಾ ಗರಿಷ್ಠ ಪರಿಮಾಣವನ್ನು ತಲುಪಿ ಅನಂತರ ಹಲವಾರು ವರ್ಷಗಳ ಕಾಲ ಹಾಗೆಯೇ ಮುಂದುವರಿಯುತ್ತದೆ. ಒಂದು ವಯಸ್ಕ ಗಿಡದಿಂದ ವರ್ಷಕ್ಕೆ ಸುಮಾರು 1ಕೆ.ಜಿ. ಹಸಿ ಎಲೆಯನ್ನು ಪಡೆಯಬಹುದು. ಸುಮಾರು 2 ಕೆ.ಜಿ ಎಲೆಗಳಿಂದ 0.5 ಕೆ.ಜಿ ಸಿದ್ದ ಚಹಾ ಸೊಪ್ಪು ದೊರೆಯುತ್ತದೆ. ಈ ಲೆಕ್ಕದಂತೆ ಒಂದು ಎಕರೆಗೆ ಸುಮಾರು 500 ಕೆ.ಜಿ. ಸಿದ್ಧ ಚಹಾ ಸೊಪ್ಪನ್ನು ಪಡೆಯಬಹುದು. ಭಾರತದ ವಿವಿಧ ಭಾಗಗಳಲ್ಲಿ ಇಳುವರಿಯ ಮೊತ್ತದಲ್ಲಿ ವ್ಯತ್ಯಾಸಗಳಿವೆ. ಉದಾಹರಣೆಗೆ ಡಾರ್ಜಿಲಿಂಗಿನ ತೋಟಗಳಲ್ಲಿನ ಇಳುವರಿ ಎಕರೆಗೆ 225 ಕೆ.ಜಿ. ಆದರೆ ಅಸ್ಸಾಮಿನಲ್ಲಿ ಇದು ಎಕರೆಗೆ 550-1000ಕೆ.ಜಿ. ಇದೆ. ಇಳುವರಿಯ ದೃಷ್ಟಿಯಿಂದ ಚಹಾಗಿಡದ ಆಯುಸ್ಸು 30-50 ವರ್ಷಗಳಾದರೂ ಭಾರತ ಹಾಗೂ ಶ್ರೀಲಂಕಾಗಳಲ್ಲಿ 70-100 ವರ್ಷ ವಯಸ್ಸಿನ ಗಿಡಗಳಿಂದಲೂ ಚಹಾ ಪಡೆಯಬಹುದಾಗಿದೆ. ಜಪಾನಿನಲ್ಲಿ 100-200 ವರ್ಷದ ಗಿಡಗಳೂ ಆರ್ಥಿಕವಾಗಿ ಲಾಭದಾಯಕ ರೀತಿಯಲ್ಲಿ ಇಳುವರಿಯನ್ನು ಕೊಡುತ್ತವೆ. ಸಾಮಾನ್ಯವಾಗಿ ಗಿಡಗಳು ಮುದಿಯಾದಂತೆಲ್ಲ ಅವನ್ನು ತೆಗೆದುಹಾಕಿ ಬೇರೆ ಗಿಡಗಳನ್ನು ಅವುಗಳ ಜಾಗದಲ್ಲಿ ಹಾಕುವ ಕ್ರಮ ಉಂಟು. ಹೀಗೆ ಬದಲಿಸಲು ಕೆಲವು ನಿರ್ದಿಷ್ಟ ಕ್ರಮಗಳನ್ನು ಅನುಸರಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲ ಚಹಾ ತೋಟಗಳಲ್ಲೂ ಬದಲಾವಣೆಗೆ ಬೇಕಾಗುವ ಗಿಡಗಳನ್ನು ಬೆಳೆಸಲೆಂದು ಮೀಸಲಿರಿಸಿದ್ದ ಸ್ಥಳಗಳುಂಟು. ಇಂಥಲ್ಲಿ ಬೆಳೆದ 3 ವರ್ಷ ವಯಸ್ಸಿನ ಗಿಡಗಳನ್ನು ಆಯ್ದು ವರ್ಗಾಯಿಸುತ್ತಾರೆ.

ಚಹಾ ಸೊಪ್ಪಿನ ದರ್ಜೆಗಳು ಹಾಗೂ ಗುಣ : ಸಿದ್ಧಗೊಳಿಸಿದ ಚಹಾ ಸೊಪ್ಪಿನ ಗುಣದಲ್ಲಿ ಅನೇಕ ವ್ಯತ್ಯಾಸಗಳನ್ನು ಗುರುತಿಸಬಹುದು. ಈ ವ್ಯತ್ಯಾಸಗಳಿಗೆ ಮುಖ್ಯ ಕಾರಣ ಚಿವುಟಿ ತೆಗೆಯುವ ಎಲೆಯ ಬಗೆ. ಚಿವುಟಿದ ಭಾಗ ತುದಿ ಮೊಗ್ಗನ್ನೂ ಮೇಲಿನ ಎರಡು ಎಲೆಗಳನ್ನೂ ಒಳಗೊಂಡಿದ್ದರೆ ಅದರಿಂದ ಬರುವ ಚಹಾಸೊಪ್ಪು ಉತ್ಕøಷ್ಟ ದರ್ಜೆಯದು. ತುದಿಮೊಗ್ಗಿನೊಂದಿಗೆ 3 ಎಲೆಗಳಿದ್ದರೆ ಉನ್ನತ ಮಧ್ಯಮ ದರ್ಜೆಯದು. ತುದಿಮೊಗ್ಗು ಹಾಗೂ 4 ಎಲೆಗಳಿದ್ದರೆ ಅದರಿಂದ ಬರುವ ಉತ್ಪನ್ನ ಒರಟು ದರ್ಜೆಯದು. ಉತ್ಕøಷ್ಟ ದರ್ಜೆಯ ಚಹಾ ಸೊಪ್ಪಿಗೆ 'ಪೆಕೋಸ್ ಮತ್ತು 'ಕಾಂಗೂಸ್ ಎಂಬ ಉಪದರ್ಜೆಗಳಿವೆ. ವಿವಿಧ ದರ್ಜೆಯ ಚಹಾಗಳನ್ನು ಸಂಸ್ಕರಿಸಿ ಸಿದ್ಧಗೊಳಿಸುತ್ತಿರುವಾಗ ಅವನ್ನು 'ಬ್ರೋಕನ್ಸ್ 'ಡಸ್ಟ್ ಹಾಗೂ 'ಫ್ಯಾನಿಂಗ್ಸ್ ಎಂಬ ಇನ್ನೂ ಕೆಲವು ವರ್ಗಗಳಾಗಿ ವಿಂಗಡಿಸುವುದುಂಟು.

ಮಾರುಕಟ್ಟೆಗೆ ಚಹಾ ಸೊಪ್ಪನ್ನು ಸಿದ್ಧಪಡಿಸುವುದು : ಗಿಡಗಳಿಂದ ಕುಡಿ ಮತ್ತು ಎಲೆಗಳನ್ನು ಬಿಡಿಸಿದ ತರುವಾಯ ಅವನ್ನು ಚಹಾ ಕಾರ್ಖಾನೆಗೆ ಪರಿಷ್ಕರಣಕ್ಕಾಗಿ ಸಾಗಿಸುತ್ತಾರೆ. ಮಾರುಕಟ್ಟೆಗೆ ಬರುವುದರಲ್ಲಿ ಕಪ್ಪು ಚಹಾ ಮತ್ತು ಹಸಿರು ಚಹಾ ಎಂಬ ಎರಡು ವಿಧಗಳಿವೆ. ಇವಲ್ಲದೆ ಊಲಾಂಗ್ ಮತ್ತು ಇಟ್ಟಿಗೆ ಚಹ ಎಂಬೆರಡು ಬಗೆಗಳೂ ಇವೆ.
ಕಪ್ಪು ಚಹಾ : ಕಪ್ಪು ಚಹಾಸೊಪ್ಪನ್ನು ಸಂಸ್ಕರಿಸುವುದರಲ್ಲಿ ಬಾಡಿಸುವುದು, ಅರೆಯುವುದು, ಹುಳಿಸುವುದು, ಒಣಗಿಸುವುದು ಎಂಬ 4 ಹಂತಗಳಿವೆ.

1  ಬಾಡಿಸುವುದು : ಗಿಡದಿಂದ ಬಿಡಿಸಿದ ಎಲೆಗಳನ್ನು ತೆಳುವಾಗಿ ಒಣಗಲು ಬಿಡುತ್ತಾರೆ. ಹಾಗೆ ಬಿಟ್ಟಾಗ ಅವು ಸುಮಾರು ಅರ್ಧ ಭಾಗ ತೇವವನ್ನು ಕಳೆದುಕೊಂಡು, ಸ್ವಲ್ಪ ಒರಟಾಗುವುದಲ್ಲದೆ ತಿರುಚಿಕೊಳ್ಳುತ್ತವೆ. ಕೆಲವು ಸಲ ಈ ಕಾರ್ಯಕ್ಕೆ ಸಹಾಯಕವಾಗುವಂತೆ ಬಿಸಿಗಾಳಿಯನ್ನು ಬಿಡುವುದೂ ಉಂಟು. ಎಲೆಗಳನ್ನು ಸಾಮಾನ್ಯವಾಗಿ 18 ಗಂಟೆಗಳ ಕಾಲ ಬಾಡಿಸಲಾಗುವುದು. ಚಹಾ ಸೊಪ್ಪಿನಲ್ಲಿ ಹೆಚ್ಚು ತೇವವಿದ್ದರೆ ಅರೆಯುವಾಗ ಮುದ್ದೆಯಾಗಿ ಬಿಡುತ್ತದೆ. ಹರಡಲು ಅನುಕೂಲವಾಗಲು ದೊಡ್ಡ ಕೊಠಡಿಗಳಲ್ಲಿ ಒಂದರ ಮೇಲೊಂದರಂತೆ ಅಟ್ಟಗಳನ್ನು ಮಾಡಿ ಅವುಗಳ ಮೇಲೆ ಗೋಣಿಚೀಲ ಹಾಕಿ ಅವುಗಳ ಮೇಲೆ ಎಲೆಗಳನ್ನು ದಪ್ಪವಾಗಿ ಹರಡುತ್ತಾರೆ.

2  ಅರೆಯುವುದು : ಬಾಡಿಸಿದ ಚಹಾಸೊಪ್ಪನ್ನು ಗ್ರಾನೈಟ್ ಚಕ್ರಗಳ ಸಹಾಯದಿಂದ ಅರೆಯುವುದು ಈ ಹಂತದ ಕೆಲಸ. ದೊಡ್ಡ ದೊಡ್ಡ ಅರೆಯುವ ಯಂತ್ರಗಳಲ್ಲಿ ಎಲೆಗಳನ್ನು ತುಂಬಲು ಅನುಕೂಲವಾಗುವಂತೆ ದೊಡ್ಡ ಆಲಿಕೆಗಳು, ತಿರುಗುವ ಚಕ್ರಗಳು ಮತ್ತು ಅರೆಯಲಾದ ಎಲೆಗಳನ್ನು ಹೊರಕ್ಕೆ ತೆಗೆಯಲು ಬಾಗಿಲುಗಳು ಇರುತ್ತವೆ. ಚಕ್ರಗಳ ಒತ್ತಡವನ್ನು ಹೆಚ್ಚು ಕಡಿಮೆ ಮಾಡಲು ಅನುಕೂಲಗಳುಂಟು. ಎಲೆಗಳ ಕೋಶಗಳು ಒಡೆದು ಒಳಗಿರುವ ಮುಖ್ಯ ಅಂಶವಾದ ಎಣ್ಣೆ ಮತ್ತು ಇತರ ವಸ್ತುಗಳು ಹೊರಬಂದು ಎಲ್ಲ ಭಾಗವನ್ನೂ ಆವರಿಸುತ್ತವೆ. ಇದರಿಂದ ಮುಂದಿನ ಹಂತವಾದ ಹುಳಿಸುವಿಕೆಗೆ ಅನುಕೂಲವಾಗುತ್ತದೆ. ಅರೆಯುವಾಗ ಉಷ್ಣತೆ ಹೆಚ್ಚದಂತೆ ನೋಡಿಕೊಳ್ಳಲಾಗುತ್ತದೆ. ಇಲ್ಲದಿದ್ದರೆ ಹುಳಿಸುವಿಕೆ ಅಪಕ್ವಸ್ಥಿತಿಯಲ್ಲೆ ನಡೆದುಹೋಗುತ್ತದೆ. ಅರೆಯುವುದನ್ನು 10-30 ಮಿನಿಟುಗಳ ಕಾಲ ಮಾಡಿದ ಅನಂತರ ಅದನ್ನು ಜರಡಿ ಹಿಡಿದು ಮೇಲುಳಿಯುವ ಒರಟು ಭಾಗವನ್ನು ಮತ್ತೆ ಹೆಚ್ಚು ಒತ್ತಡದಿಂದ ಅರೆಯಲಾಗುತ್ತದೆ.

3 ಹುಳಿಸುವುದು : ಅರೆಯುವ ಯಂತ್ರದಿಂದ ಹೊರಬಂದ ಎಲೆಗಳನ್ನು ಸಿಮೆಂಟ್, ಉಕ್ಕು, ಇಲ್ಲವೆ ತಗಡಿನ ಮೇಲೆ  ದಪ್ಪವಿರುವಂತೆ ಹರಡಲಾಗುತ್ತದೆ. ಕೊಠಡಿಯನ್ನು ತಂಪಾಗಿಟ್ಟಿರಲು ನೆಲದ ಮೇಲೆ ನೀರು ಸಿಂಪಡಿಸಿರುವುದುಂಟು. ಕೊಠಡಿಯ ಕಾರ್ಯ ಮುಕ್ತಾಯಗೊಳ್ಳುತ್ತದೆ. ಎಲೆಯ ಬಣ್ಣ ಮತ್ತು ವಾಸನೆಯಿಂದ ಹುಳಿಸುವುದು ಮುಗಿದಿದೆ ಎಂದು ಕಂಡುಕೊಳ್ಳಬಹುದು. ಹಸಿರು ಬಣ್ಣದ ಎಲೆಗಳು ಕೆಂಪು ಮಿಶ್ರಿತ ತಾಮ್ರ ಬಣ್ಣವನ್ನು ತಳೆಯುತ್ತವೆ. ಹುಳಿಸುವುದು ಹೆಚ್ಚಾದರೆ ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಸಿದ್ಧಪಡಿಸಿದ ಚಹಾದ ಗುಣ, ಬಣ್ಣ, ತೀಕ್ಷ್ಣತೆ, ಬಲ ಮತ್ತು ಸುವಾಸನೆ ಈ ಹಂತವನ್ನು ಅವಲಂಬಿಸಿವೆ.

4  ಒಣಗಿಸುವುದು : ಹುಳಿಯುವಿಕೆ ಮುಂದುವರಿಯುವುದನ್ನು ನಿಲ್ಲಿಸಲು ಈ ಕಾರ್ಯ ಅವಶ್ಯಕ. ಆದರೆ ಚಹಾ ಸೊಪ್ಪಿನಲ್ಲಿರುವ ಎಣ್ಣೆ ಆವಿಯಾಗದ ಹಾಗೆ ಉಷ್ಣತೆಯನ್ನು 230-280 ಈ ವರೆಗೆ ಮಿತಿಗೊಳಿಸುತ್ತಾರೆ. ಬರಬರುತ್ತ 200 ಈ ಗೆ ಇಳಿಸಲಾಗುತ್ತದೆ. ಎಲೆ ಒಣಗಲು ಸುಮಾರು 30-40 ಮಿನಿಟುಗಳು ಬೇಕಾಗುತ್ತವೆ. ಚೆನ್ನಾಗಿ ಒಣಗಿದ ಮೇಲೆ ತೇವಾಂಶ 3%-6% ಇರುತ್ತದೆ. ಒಣಗಿದ ಎಲೆಗಳು ಗರಿಗರಿಯಾಗಿ ಮುಟ್ಟಿದರೆ ಹುಡಿಯಾಗುವಂತಿರುತ್ತವೆ. ಅನಂತರ ಒಣಗಿದ ಎಲೆಗಳನ್ನು ಶುಚಿಮಾಡಿ, ಜರಡಿ ಹಿಡಿದು ವಿವಿಧ ದರ್ಜೆಗಳಾಗಿ ವಿಂಗಡಿಸಲಾಗುತ್ತದೆ.

ಸಂಸ್ಕರಿಸಿದ ಚಹಾವನ್ನು ಪ್ಲೈವುಡ್ ಪೆಟ್ಟಿಗೆಗಳಲ್ಲಿ ತುಂಬಿ ಸಗಟು ಮಾರಾಟಕ್ಕೆ ಕಳುಹಿಸುತ್ತಾರೆ. ಪೆಟ್ಟಿಗೆಯ ಅಳತೆ ಸಾಮಾನ್ಯವಾಗಿ 60*47.5*47.5 ಸೆ.ಮಿ. ಒಳಗೆ ಅಲ್ಯೂಮಿನಿಯಮ್ ಪದರದ ಆವರಣವೊಂದಿದೆ. ಮಾರುಕಟ್ಟೆಗೆ ಕಳುಹಿಸುವ ಮೊದಲು ಆಯಾ ಸಂಸ್ಥೆಗಳು ತಮ್ಮವೇ ಆದ ವಿಶಿಷ್ಟ ಸುವಾಸನೆಗಳನ್ನು ಸೇರಿಸಿ ಸಣ್ಣ ಸಣ್ಣ ಪೊಟ್ಟಣಗಳಲ್ಲಿ ತುಂಬುವುದುಂಟು.
ಕಾರ್ಖಾನೆಗಳಲ್ಲಿ ಚಹಾದ ಗುಣವನ್ನು ಕಂಡುಹಿಡಿಯಲು ಚಹಾ ರುಚಿಗಾರರಿರುತ್ತಾರೆ. ಅವರು ಪ್ರತಿರಾಶಿಯಿಂದಲೂ ತೆಗೆದ ಮಾದರಿಯಿಂದ ಚಹಾ ಮಾಡಿ ರುಚಿ ನೋಡಿ ಅನಂತರ ಮಾರಾಟಕ್ಕೆ ಬಿಡುಗಡೆ ಮಾಡುತ್ತಾರೆ.

ಹಸಿರು ಚಹಾ : ಭಾರತದಲ್ಲಿ ಇದರ ಉಪಯೋಗ ಅಷ್ಟಾಗಿ ಇಲ್ಲ. ಅಮೆರಿಕ, ಚೀನ ಮತ್ತು ಜಪಾನುಗಳಲ್ಲಿ ಮಾತ್ರ ಇದು ಬಹಳ ಬಳಕೆಯಲ್ಲಿದೆ. ಹಸಿರು ಚಹಾ ಸಿದ್ಧಗೊಳಿಕೆಯಲ್ಲಿ ಬಾಡಿಸುವ ಮತ್ತು ಹುಳಿಸುವ ಹಂತಗಳಿರುವುದಿಲ್ಲ. ಅರೆಯುವಾಗ ಎಲೆಗಳ ಕೋಶಗಳು ಒಡೆದು ಅದರೊಳಗಿನ ಪದಾರ್ಥಗಳು ಚಹಾ ಸೊಪ್ಪಿನ ಮೇಲೆ ಹರಡಿ ಹಾಗೆಯೇ ಉಳಿಯುವುದರಿಂದ ಚಹಾ ಪಾನೀಯ ತಯಾರಿಸುವಾಗ ಸುಲಭವಾಗಿ ಸೇರುತ್ತವೆ.

ಊಲಾಂಗ್ ಚಹಾ : ಇಲ್ಲಿ ಚಹಾ ಅರ್ಧ ಹುಳಿಸಲ್ಪಡುತ್ತದೆ. ಇದನ್ನು ಅಮೆರಿಕ ಮತ್ತು ಫಾರ್ಮೋಸ್‍ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈಗ ಇದಕ್ಕೆ ಬೇಡಿಕೆ ಬಹಳ ಕಡಿಮೆಯಾಗಿದೆ.

ಇಟ್ಟಿಗೆ ಚಹಾ : ಇದನ್ನು ಟಿಬೆಟ್ ಮತ್ತು ಮಧ್ಯ ಏಷ್ಯಗಳಲ್ಲಿ ಬಹಳ ಉಪಯೋಗಿಸುತ್ತಾರೆ. ಇದರಲ್ಲಿ ಎಲೆಗಳನ್ನು ಹಬೆಯಲ್ಲಿ ಸ್ವಲ್ಪಕಾಲ ಇಟ್ಟು ಅನಂತರ ಫ್ಯಾನ್ ಮಾಡುತ್ತಾರೆ. ಇದರಿಂದ ಎಲೆಗಳು ಮೃದುವಾಗಿ, ಅಲಿವ್ ಹಸಿರು ಬಣ್ಣವನ್ನು ತಳೆಯುತ್ತವೆ. ಅನಂತರ 1/2 ಗಂಟೆಯ ಕಾಲ ಇವನ್ನು ಯಂತ್ರಗಳಿಂದ ಅರೆದು ಸಿಮೆಂಟ್ ನೆಲ ಅಥವಾ ಚಾಪೆಗಳ ಮೇಲೆ 15 ಛಿm. ಎಲ್ಲವೆ 5-7.5 ಛಿm ದಪ್ಪವಾಗಿ ಹಾಕಿ ಮೇಲೆ ಟಾರ್‍ಪಾಲಿನ್ ಮುಚ್ಚಿ 4-5 ದಿವಸಗಳ ಕಾಲ ಬಿಡುತ್ತಾರೆ. ಅನಂತರ ಎಲೆಗಳನ್ನು ಒಣಗಿಸಿ ಆರಿಸಿ ದರ್ಜೆಗಳಾಗಿ ವಿಂಗಡಿಸುತ್ತಾರೆ. ಆಮೇಲೆ ಇದನ್ನು ಗಂಜಿಯಲ್ಲಿ ಬೆರೆಸಿ 11/2 ಮಿನಿಟ್ ಹವೆಯಲ್ಲಿ ಬೇಯಿಸಿ ಅಚ್ಚುಗಳಲ್ಲಿ ಒತ್ತಿಡುತ್ತಾರೆ. ಈ ಚಹಾದಲ್ಲಿ ಟ್ಯಾನಿನ್ ಅಂಶ ಕಡಿಮೆ ಇರುತ್ತದೆ.
ಚಹಾದ ಹಸಿರು ಎಲೆಯಲ್ಲಿ ವಿವಿಧ ಅಂಶಗಳು ಈ ರೀತಿ ಇವೆ : ಒರಟು ನಾರು 24.00%, ಪಾಲಿಫಿನಾಲ್ (ಟ್ಯಾನಿನ್) 22.00%, ಸಸಾರಜನಕ ಪದಾರ್ಥಗಳು (ಪ್ರೋಟೀನ್) 17.00%, ಕೊಬ್ಬು 8.00%, ಅಮೈನೋ ಆಮ್ಲ 7.00%, ಪೆಕ್ಟಿನ್ 6.50%, ಬೂದಿ 5.00%, ಕೆಫೀನ್ 4.00%, ಸಕ್ಕರೆ 3.00%, ಆರ್ಸಾನಿಕ್ ಆಮ್ಲ 3.00%, ಪಿಷ್ಟ 0.50%, ಅಲ್ಲದೆ ರೈಬೋಫ್ಲೇವಿನ್, ಕ್ಯರೊಟೀನ್, ನಿಕೋಟಿನಿಕ್ ಆಮ್ಲ, ಪ್ಯಾಂಟೋತಿನಿಕ್ ಆಮ್ಲ ಮತ್ತು ಆಸ್ಕಾರ್ಬಿಕ್ ಆಮ್ಲ ಕೂಡ ಇವೆ.

ಚಹಾ ಗಿಡದ ರೋಗಗಳು ಮತ್ತು ಕೀಟಗಳು : ಕೀಟಗಳಲ್ಲಿ ಮುಖ್ಯವಾದವು ಸೊಳ್ಳೆಮಚ್ಚೆ ಮತ್ತು ಕೆಂಪು ಜೇಡ. ಸೊಳ್ಳೆ ಮಚ್ಚೆ ಹಲೋಪೆಲ್ಟಿಸ್ ಎಂಬ ತಿಗಣೆಯಿಂದ ಉಂಟಾಗುತ್ತದೆ. ಪ್ರಾಯಕ್ಕೆ ಬಂದ ಹುಳು ಹಾರುವಾಗ ಸೊಳ್ಳೆಯ ಹಾಗೆ ಕಾಣುವುದರಿಂದ ಅದಕ್ಕೆ ಸೊಳ್ಳೆಮಚ್ಚೆ ಎಂಬ ಹೆಸರು ಬಂದಿದೆ. ವಯಸ್ಕ ತಿಗಣೆ ಎಲೆಗಳನ್ನು ಕೊರೆದು ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳಿಂದ ಹೊರ ಬರುವ ಡಿಂಭಗಳು ಎಲೆಯ ಅಂಗಾಂಶಗಳನ್ನು ತಿನ್ನುತ್ತವೆ. ದೊಡ್ಡವಾದಂತೆ ಎಲೆಯ ಹೊರಪದರವನ್ನು ತೂತು ಮಾಡಿ ರಸ ಹೀರತೊಡಗುತ್ತವೆ. ಈ ರೀತಿ ಎಲೆಗಳ ಮೇಲೆ ಅನೇಕ ತೂತುಗಳಾಗುವುದರಿಂದ ಎಲೆಗಳು ಸುರುಟಿಕೊಂಡು ಕಪ್ಪಾಗುತ್ತವೆ. ಇದಕ್ಕೆ ಪರಿಣಾಮಕಾರಿ ಔಷಧಿಗಳಿಲ್ಲ. ಕೀಟನಾಶಕಗಳನ್ನು ಬಳಸಬಹುದಾದರೂ ಇವು ಎಲೆಗಳನ್ನು ಕೆಡಿಸುವುದಲ್ಲದೆ, ತಿಗಣೆಗಳು ಬೀಳುವ ಸಮಯದಲ್ಲಿ ವಿಪರೀತ ಮಳೆಯೂ ಇರುವುದರಿಂದ ಹಾಕಿದ ನಾಶಕ ತೊಳೆದು ಹೋಗುವ ಸಂಭವ ಉಂಟು. ಪ್ರಾರಂಭದಲ್ಲಿ ಬಲೆಗಳಿಂದ ಪ್ರೌಢ ತಿಗಣೆಗಳನ್ನು ಹಿಡಿಯಬಹುದು. ನವೆಂಬರ್‍ನಿಂದ ಫೆಬ್ರವರಿವರೆಗೆ ಸವರಿಕೆಯನ್ನು ಕೈಗೊಂಡು ಚಿಗುರು ಬೇಗ ಬರುವಂತೆ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಈ ತಿಗಣೆಗಳ ಕಾಟ ತಡೆಯಬಹುದು.

ಕೆಂಪು ಜೇಡ(ಟೆಟ್ರಾನಿಕಸ್ ಬಯೋಕ್ಯುಲೇಟಸ್) : ಕೆಂಪು ಬಣ್ಣದ ಅತಿ ಸಣ್ಣ ಜೇಡ. ಎಲೆಗಳ ಸಾರವನ್ನು ಹೀರುತ್ತದೆ. ಎಲೆಗಳ ಮೇಲೆ ಅಪಾರ ಸಂಖ್ಯೆಯಲ್ಲಿ ಗುಂಪುಗೂಡುವುದರಿಂದ ಎಲೆಗಳೆಲ್ಲ ಕೆಂಪುಬಣ್ಣದವಾಗಿ ಕಾಣುತ್ತವೆ. ಮೊದಲ ಮಳೆ ಬೀಳುವವರೆಗೆ ಇವುಗಳ ಹಾವಳಿ ಅಪಾರ. ಅನಂತರ ಜೇಡಗಳು ಕಾಣೆಯಾಗುತ್ತವೆ. ಈ ಜೇಡಗಳ ಹಾವಳಿಗೆ ತುತ್ತಾದ ಗಿಡಗಳು ಬಲಹೀನವಾಗುವುದರಿಂದ ಪರಾವಲಂಬಿಗಳಿಗೆ ಸುಲಭವಾಗಿ ಬಲಿಯಾಗುತ್ತವೆ. ಬೂದಿಮಿಶ್ರಿತ ಗಂಧಕದ ಪುಡಿಯನ್ನು ಸಿಂಪಡಿಸುವುದರಿಂದ ಈ ಕೀಟವನ್ನು ಹತೋಟಿಗೆ ತರಬಹುದು. ದೂಳು ಹಾಕುವ ಮೊದಲು ಗಿಡಗಳ ಮೇಲೆ ನೀರನ್ನು ಸಿಂಪಡಿಸಿದರೆ ಧೂಳು ಚೆನ್ನಾಗಿ ಅಂಟಿಕೊಳ್ಳುತ್ತದೆ.

ಇವೆರಡು ಕೀಟ ಪಿಡುಗುಗಳಲ್ಲದೆ ಚಹಾಗಿಡಗಳಿಗೆ ನುಸಿ, ಹಸಿರು ನೊಣ, ಪಿಂಕ್ ಜೇಡ ಮತ್ತು ಕೊರೆಯುವ ಹುಳಗಳ ಹಾವಳಿಯೂ ಉಂಟು. ಆದರೆ ಇವು ಅಷ್ಟು ಅಪಾಯಕಾರಿಗಳಲ್ಲ. ಚಹಾ ಗಿಡದ ಬೇರು, ಕಾಂಡ ಮತ್ತು ಎಲೆಗಳನ್ನು ಬಾಧಿಸುವ ಅನೇಕ ರೋಗಗಳೂ ಉಂಟು. ಇವುಗಳಲ್ಲಿ ಅತಿ ಮುಖ್ಯವಾದುದು ಬೇರಿಗೆ ಬರುವ ಮೋಟು ಕೊಳೆತ. ಇದರಿಂದ ಎಲೆಗಳು ಒಣಗಿ ಗಿಡಗಳು ಬಹು ಬೇಗ ಸಾಯುತ್ತವೆ. ರೋಗಪೀಡಿತ ಗಿಡದ ಬೇರುಗಳನ್ನು ಅಗೆದು ನೋಡಿದರೆ ಅವು ಮರಳು, ಮಣ್ಣು ಮತ್ತು ಶಿಲೀಂಧ್ರಗಳಿಂದ ಕೂಡಿ ಮುದ್ದೆಯಾಗಿರುವುದನ್ನು ಗಮನಿಸಬಹುದು. ಈ ರೋಗ ಉಪ್ಟುಲೂನ ಜೊóನೇಟ ಮತ್ತು ರೋಸೆóಲಿನಿಯ ಶಿಲೀಂಧ್ರಗಳಿಂದ ಬರುತ್ತದೆ. ಇದು ಮಣ್ಣಿನ ಮೂಲಕ ಹಾಗೂ ಇತರ ಗಿಡಗಳ ಮೋಟುಗಳ ಮೂಲಕ ಹರಡುತ್ತದೆ. ರೋಗಪೀಡಿತ ಗಿಡಗಳನ್ನು ಕಿತ್ತು ಸುಡಬೇಕು. ಚಹಾಗಿಡದ ಇನ್ನೊಂದು ರೋಗವಾದ ಕಾಂಡ, ರೆಂಬೆ ಮತ್ತು ಎಲೆಗಳಿಗೆ ಬರುವ ಕೆಂಪು ತುಕ್ಕುರೋಗ ಬಹಳ ಅಪಾಯಕಾರಿಯಾದುದು. ಇದು ಸೆಫಲ್ಯೂರಸ್ ಮೈಕಾಯ್ಡಿಯ ಎಂಬ ಪರೋಪಜೀವಿ ಪಾಚಿಯಿಂದ ಉಂಟಾಗುತ್ತದೆ. ಬಹಳ ಕಾಲ ಉಪೇಕ್ಷ ಮಾಡಿದರೆ ಈ ರೋಗದಿಂದ ಗಿಡಗಳು ಸಾಯುತ್ತವೆ. ಇದು ಗಾಳಿ ಮತ್ತು ನೀರಿನ ಮೂಲಕ ಹರಡುತ್ತದೆ. ಗಿಡಗಳನ್ನು ಸವರಿದ ಅನಂತರ ಬೋರ್ಡೊ ದ್ರಾವಣವನ್ನು ಸಿಂಪಡಿಸುವುದರಿಂದ ಈ ರೋಗವನ್ನು ತಡೆಗಟ್ಟಬಹುದು. ಇವಲ್ಲದೆ ಕಂದುಮಚ್ಚೆ ರೋಗ ಮತ್ತು ದಾರಮಚ್ಚೆ ರೋಗಗಳೂ ಚಹಾ ಗಿಡಗಳಲ್ಲಿ ಕಂಡುಬರುತ್ತವೆ. ಸವರುವುದರ ಮೂಲಕ ಎರಡನೆಯದನ್ನೂ ತಡೆಯಬಹುದು.

ಚಹಾಪಾನೀಯ : ಸಿದ್ಧಪಡಿಸಿದ ಚಹಾ ಪುಡಿಯಿಂದ ಚಹಾಪಾನೀಯ ತಯಾರಿಸಿ ಕುಡಿಯುವುದು ಎಲ್ಲರಿಗೂ ತಿಳಿದದ್ದೇ. ಇದಕ್ಕೆ ಸಕ್ಕರೆ, ಹಾಲು ಸೇರಿಸಿ ಕುಡಿಯುತ್ತಾರೆ. ಕೆಲವರು ಸಕ್ಕರೆ ಇಲ್ಲದೆ ಸೇವಿಸುವುದೂ ಉಂಟು. ಕೆಲವು ಕಡೆ ಚಹಾ ಪಾನಿಯಕ್ಕೆ ಸುಗಂಧಗಳನ್ನು ಇಲ್ಲವೆ ಮಾದಕ ಪಾನೀಯಗಳನ್ನು ಬೆರೆಸಿ ಕುಡಿಯುವ ರೂಢಿ ಇದೆ. ಇತ್ತೀಚೆಗೆ ಒಂದು ಬಟ್ಟಲಿಗೆ ಬೇಕಾಗುವಷ್ಟು ಪುಡಿಯನ್ನು ಸಣ್ನ ಬಟ್ಟೆ ಚೀಲಗಳಲ್ಲಿಟ್ಟು ಮಾರುವುದುಂಟು. ಒಂದು ಬಟ್ಟಲಿಗೆ ಕುದಿಯುವ ನೀರು ಹಾಕಿ, ಇಂಥ ಒಂದು ಚೀಲವನ್ನು ಮುಳುಗಿಸಿ, ಕೆಲವು ಕಾಲದ ನಂತರ ಚೀಲ ತೆಗೆದು ಹಾಕಿ ಪಾನೀಯ ಬಳಸಬಹುದು. ಇದರಿಂದ ಸೋಸುವ ಕೆಲಸ ತಪ್ಪುತ್ತದೆ. ಈಗೀಗ ಕ್ಷಿಪ್ರ ಚಹಾವನ್ನೂ ತಯಾರಿಸಿದ್ದಾರೆ. ಕುದಿಯುವ ನೀರಿಗೆ ಈ ಪುಡಿ ಹಾಕಿ ಸಕ್ಕರೆ, ಹಾಲು ಸೇರಿಸಿದರೆ ಪಾನೀಯ ಕುಡಿಯಲು ಸಿದ್ಧವಾಗುತ್ತದೆ.

ಚಹಾಪುಡಿಯ ವೈದ್ಯಕೀಯ ಗುಣಗಳು : ಚಹಾ ಪಾನೀಯದಂತೆ ಬಳಸಲು ಮುಖ್ಯವಾದ ಅಂಶವೆಂದರೆ ಅದರಲ್ಲಿರುವ ತೀಯೀನ್ (ಆಲ್‍ಕಲಾಯ್ಡ್ ಕೆಫೀನ್). ಒಣಗಿದ ಚಹಾದಲ್ಲಿ 2-5% ತೀಯೀನ್ ಇರುತ್ತದೆ. ಇದು ಹೃದಯದ ಕ್ರಿಯೆಯನ್ನು ಪ್ರಚೋದಿಸುತ್ತದೆ. ಇದರಲ್ಲಿರುವ ಟ್ಯಾನಿನ್ ಚಹಾಕ್ಕೆ ಬಂಧಕ (ಆಸ್ಟ್ರಿಂಜೆಂಟ್) ಗುಣ ಕೊಡುತ್ತದೆ. ತೀಯೀನ್ ಸಣ್ಣ ಮೆದುಳಿಗಿಂತ ಮಾಂಸಖಂಡಗಳಿಗೆ ಹೆಚ್ಚು ಪ್ರಚೋದಕವಾಗಿದೆ. ಸಾಧಾರಣ ಪ್ರಮಾಣದಲ್ಲಿ ಚಹಾವನ್ನು ಸೇವಿಸಿದರೆ ದೇಹದ ದಣಿವು ಪರಿಹಾರವಾಗುತ್ತದೆ. ಚಹಾ ಮೂತ್ರಸ್ರಾವವನ್ನು ಉತ್ತೇಜಿಸುತ್ತದೆ. ಆದರೆ ಹೆಚ್ಚಾಗಿ ಸೇವಿಸಿದರೆ ಜೀರ್ಣಾಂಗಗಳನ್ನು ಘಾಸಿಪಡಿಸುತ್ತದೆ. ಕಣ್ಣಿನ ಚರ್ಮದ ಊತ ಬಾಧೆ ನಿವಾರಿಸಲು ಚಹಾ ಎಲೆಯ ಕಷಾಯವನ್ನು ಬಳಸುತ್ತಾರೆ.
(ಕೆ.ಆರ್.ಜಿಎ.; ಪಿ.ಕೆ.ಆರ್.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ